ಸೌಂದರ್ಯಮೀಮಾಂಸೆ
 	ಸೌಂದರ್ಯವನ್ನು ಕುರಿತು ಅಧ್ಯಯನ ಮಾಡುವ ಒಂದು ಶಾಸ್ತ್ರ (ಈಸ್ತೆಟಿಕ್ಸ್). ಎಲ್ಲ ಲಲಿತ ಕಲೆಗಳಿಗೂ ಸಮಾನ ವಿಷಯವಾಗಿರುವ, ಪ್ರಕೃತಿಯಲ್ಲೂ ಕಂಡುಬರುವ ಸೌಂದರ್ಯದ ಸ್ವರೂಪವನ್ನು ಇದು ವಿವೇಚಿಸುತ್ತದೆ. ಸೌಂದರ್ಯವೆಂದರೇನು,  ಅದರ ಸ್ವರೂಪವೇನು, ಎನ್ನುವುದನ್ನು ಕುರಿತು ಭಾರತೀಯರಲ್ಲಿ ವಿಶೇಷ ಚರ್ಚೆ ಕಂಡುಬರುವುದಿಲ್ಲ. ಆದರೆ ಇದು ಕಾವ್ಯಮೀಮಾಂಸೆಯ ಒಂದು ಅಂಗವಾಗಿ ಬೆಳೆದು ಬಂದಿದೆ. ಕಾವ್ಯವನ್ನು ಕುರಿತು, ಕಾವ್ಯ ಸೌಂದರ್ಯಮೀಮಾಂಸೆ ಭಾರತದಲ್ಲಿ ಒಂದು ಸ್ವತಂತ್ರ ಶಾಸ್ತ್ರವಾಗಿ ಬೆಳೆಯಲಿಲ್ಲ. ಪಶ್ಚಿಮದಲ್ಲಿ ಇದನ್ನು ಕುರಿತು ವಿಶೇಷ, ವಿಪುಲ ಚರ್ಚೆಗಳಿವೆ.

	ಸೌಂದರ್ಯಮೀಮಾಂಸೆಯ ಪರಿಶೀಲನೆಗೆ ಎರಡು ಮಾರ್ಗಗಳಿವೆ. ಒಂದು ತಾತ್ತ್ವಿಕ ವಿಧಾನ, ಮತ್ತೊಂದು ವೈಜ್ಞಾನಿಕ ವಿಧಾನ. ಮೊದಲನೆಯದು ಈ ವಿಶ್ವದ ಸ್ವರೂಪವೇನು ಎನ್ನುವ ವಿಚಾರದಿಂದ ಹೊರಟು, ಈ ಲೋಕದ ಸೌಂದರ್ಯವನ್ನು ಕಲೆಯ ಸಹಾಯದಿಂದ ವಿವರಿಸುತ್ತದೆ. ಮತ್ತೊಂದು ಈ ನಾಮರೂಪಲೋಕದ ವಸ್ತುಸತ್ಯಗಳನ್ನು ವಿಮರ್ಶಿಸಿ, ಸೌಂದರ್ಯ ಸ್ವರೂಪವನ್ನು ವಿವರಿಸುತ್ತದೆ.

	ಸೌಂದರ್ಯವನ್ನು ಕುರಿತು ಆಧ್ಯಾತ್ಮಿಕ ವಿಚೇಚನೆಯನ್ನು ನೀಡಿದವರಲ್ಲಿ ಬಹುಶಃ ಭಾರತೀಯ ಋಷಿಗಳೇ ಮೊದಲಿಗರು. ಇದೇ ಮತವನ್ನು ಪಾಶ್ಚಾತ್ಯರಲ್ಲಿ ಮೊದಲು ಸಾರಿದವನು ಸೌಂದರ್ಯ ಪ್ರವಾದಿ ಪ್ಲೇಟೋ. ಇವನ ಶಿಷ್ಯ ಅರಿಸ್ಟಾಟಲ್, ಈತನ ಅನುಕರಣೆ ತತ್ತ್ವವನ್ನು ಒಪ್ಪಿದ್ದರೂ ಅದನ್ನು ಬೇರೆ ಅರ್ಥದಲ್ಲಿ ವಿವರಿಸಿದ. ಕ್ರಮಬದ್ಧವಾದ ಅಂಗ ಸಾಮರಸ್ಯವುಳ್ಳ ವಸ್ತು ಸುಂದರವಾದದ್ದು ಎಂದು ಹೇಳಿ, ಚೆಲುವಿಗೆ ಒಂದು ಪರಿಮಿತಿ ನಿರ್ಮಿಸಿದ. ಮನಸ್ಸನ್ನು ರಂಜಿಸಿ, ಸಂತೋಷಪಡಿಸಿ, ಮಾನವನಲ್ಲಿ ನೈತಿಕಭಾವ ಮೂಡಿಸಿ, ಅವನಲ್ಲಿ ಭಾವ ಸಂಸ್ಕಾರವನ್ನುಂಟು ಮಾಡಿ, ಉನ್ನತಸ್ಥಿತಿಗೆ ಏರಿಸುವುದೇ ಕಲೆ ಎಂದು ಅಭಿಪ್ರಾಯಪಟ್ಟ. ಆದುದರಿಂದ ಸೌಂದರ್ಯವೆಂದರೇನು ಎಂಬ ಪ್ರಶ್ನೆಯಲ್ಲಿ ಯಾವುದು ಸತ್ಯವನ್ನೂ ಪ್ರಕೃತಿ ಸತ್ವವನ್ನೂ ಧ್ಯೇಯವನ್ನೂ ವಿಶ್ವಸಾಮಾನ್ಯವಾದುದನ್ನೂ ಮಾದರಿಯಾದುದನ್ನೂ ಪ್ರಕಾಶಪಡಿಸುತ್ತದೆಯೋ ಮತ್ತು ಯಾವುದು ವ್ಯಕ್ತಿಯನ್ನು ಹಿತವಾದ ಸಾಮಾಜಿಕ ಪರಿಣಾಮಗಳ ಕಡೆಗೆ ಒಯ್ಯುವುದೋ ಯಾವುದು ಕಲೆಯ ಮೂಲಕ ಚೈತನ್ಯೋತ್ಕರ್ಷವನ್ನು ಸಾಧಿಸುವುದೋ — ಅದು ಸೌಂದರ್ಯ ಎಂಬ ಅಭಿಪ್ರಾಯವನ್ನು ಹಲವರ ತತ್ತ್ವಗಳಿಂದ ಗ್ರಹಿಸಬಹುದು. ಸೌಂದರ್ಯವನ್ನು ಕುರಿತು ಹಲವು ಕವಿಗಳು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಗಯಟೆ, ಕೋಲ್‍ರಿಜ್, ರಸ್ಕಿನ್, ಟಾಲ್‍ಸ್ಟಾಯ್ ಮುಂತಾದವರು ಮೇಲಿನ ಅಭಿಪ್ರಾಯಗಳನ್ನೇ ಅನುಮೋದಿಸಿದ್ದಾರೆ.

	ಕ್ಯಾಂಟನ ವಿಚಾರಧಾರೆ ಪಾಶ್ಚಾತ್ಯ ಸೌಂದರ್ಯಮೀಮಾಂಸೆಯಲ್ಲಿ ಅತಿ ಮುಖ್ಯವಾದ ಘಟ್ಟ. ನಿರ್ಲಿಪ್ತ ಮನಸ್ಥಿತಿಯಿಂದ ಲೋಕದಲ್ಲಿ ಕಾಣುವ ವಸ್ತುಗಳನ್ನು ನೋಡಿದಾಗ ಅವು ಒಂದು ರೀತಿಯ ಸಂತೋಷವನ್ನು ಕೊಡುತ್ತವೆ. ಈ ರೀತಿ ಸಂತೋಷವನ್ನು ನೀಡುವುದರಿಂದ ಅವು ಸುಂದರವಾಗುತ್ತವೆ ಎಂದು ಈತ ಹೇಳುತ್ತಾನೆ. ಇವನ ತತ್ತ್ವದ ಆಧಾರದ ಮೇಲೆ ಷೂಪೆನ್ಹೋವರ್ ತನ್ನ ವಿಚಾರಧಾರೆಯನ್ನು ಮುಂದುವರಿಸಿದ್ದಾನೆ. ವಸ್ತುವೊಂದು ಸುಂದರವಾಗಿದೆ ಎಂದು ತಿಳಿಯುವುದು ಕೇವಲ ಇಂದ್ರಿಯಾನುಭವದಿಂದ ಅಲ್ಲ; ವೈಜ್ಞಾನಿಕ ವಿಧಾನದಿಂದಲೂ ಅಲ್ಲ; ತರ್ಕದಿಂದಲೂ ಅಲ್ಲ; ಪ್ರತಿಭಾನದಿಂದ ಎಂದು ಈತ ಹೇಳುತ್ತಾನೆ. ಅಂದರೆ ವಸ್ತುವನ್ನು ಪದಾರ್ಥದ ಹೊರಗಡೆಗಿಂತಲೂ ಅದರ ಅಂತರಂಗದಲ್ಲಿ ಹೊಕ್ಕು ನೋಡಿದಾಗ ಸೌಂದರ್ಯ ದೊರೆಯುತ್ತದೆ. ಈತನ ಮತ್ತು ಕ್ಯಾಂಟನ ತತ್ತ್ವಗಳನ್ನು ಒಪ್ಪಿಕೊಂಡ ಲಿಪ್ಯ್ ಮತ್ತು ಸಂತಾಯನ ಇನ್ನೂ ಮುಂದೆ ಹೋಗಿ ಸೌಂದರ್ಯವೇನಿದ್ದರೂ ಮಾನಸಿಕ ಕ್ರಿಯೆಯ ಪ್ರತಿಬಿಂಬವೇ ಆಗಿದೆ ಎಂದಿದ್ದಾರೆ. ಇ.ಎಫ್. ಕ್ಯಾರೆಟ್ ಎಂಬುವವ ಕಲಾವಿದನ ಪ್ರತಿಭಾಕ್ರಿಯೆ ಕೇವಲ ಅನುಕರುಣೆಯಲ್ಲ, ಅದೊಂದು ಸ್ವತಂತ್ರ ನಿರ್ಮಾಣ ಸಾಮಥ್ರ್ಯ; ಕಲೆ ಎನ್ನುವುದು ಸೌಂದರ್ಯವನ್ನು ಸೆರೆಗೈಯ್ಯುವ ಒಂದು ವಿಶೇಷ ಕ್ರಿಯೆ ಎಂದಿದ್ದಾನೆ. ಕ್ಯಾಥರಿನ್ ಗಿಲ್ಬರ್ಟ್, ಬಸಾಂಕ್ವೆ ಮೊದಲಾದವರು ಕಲಾ ಸೌಂದರ್ಯ ಯಶಸ್ವಿಯಾದ ಮಾಧ್ಯಮದಲ್ಲಿ ನಮ್ಮನ್ನು ಮರುಳುಗೊಳಿಸುವ, ತನ್ಮೂಲಕ ನಮ್ಮನ್ನು ನಾವೇ ಮೈಮರೆಯುವಂತೆ ಮಾಡುವ ಶಕ್ತಿ ಎಂದಿದ್ದಾರೆ. 

	ಹೀಗೆ ಆಧುನಿಕರಲ್ಲಿ ಸೌಂದರ್ಯವನ್ನು ಕುರಿತು ಒಂದು ಸಮನ್ವಯ ದೃಷ್ಟಿ ಬೆಳೆಯಿತು. ವಸ್ತು ಮನಸ್ಸನ್ನು ಸೌಂದರ್ಯದಿಂದ ತಣಿಸುವುದೇ ಮೊದಲಕ್ರಿಯೆ. ಸುಂದರವಾದ ವಸ್ತುವಿಗೆ ಮನಸ್ಸನ್ನು ಸಂತೋಷಪಡಿಸುವ ಶಕ್ತಿಯಿದೆ. ಅದೇ ಅದರ ಮೌಲ್ಯ ಎಂದರೆ ಆನಂದವೇ ಸೌಂದರ್ಯದ ಮೌಲ್ಯ. ಆದರೆ ಇದು ಕೇವಲ ವಸ್ತುಗಳಲ್ಲಿದೆ ಎಂದಾಗಲಿ, ವ್ಯಕ್ತಿಗಳಲ್ಲಿದೆ ಎಂದಾಗಲಿ ಅರ್ಥವಲ್ಲ. ವಸ್ತು ಮತ್ತು ವ್ಯಕ್ತಿಯ ಸಂಬಂಧದಿಂದ ಉದ್ಭವಿಸುವ ಮೂರನೆಯದಾದ ಒಂದು ಗುಣ ಈ ಸೌಂದರ್ಯ ಎಂದು ಪ್ರತಿಪಾದಿಸಿದ್ದಾರೆ.

	ಸೌಂದರ್ಯವನ್ನು ಸಾಹಿತ್ಯ ವಿಮರ್ಶೆಯ ಭಾಗವಾಗಿ ಪರಿಗಣಿಸಲಾಗಿದೆ. ಇದರಿಂದ ಅನೇಕ ಪಾರಿಭಾಷಿಕ ಪದಗಳೂ ಕಾಣಿಸಿಕೊಂಡಿವೆ. ಸೌಂದರ್ಯಾನುಭ (ಈಸ್ತೆಟಿಕ್ ಪ್ಲೆಶರ್) ಇಂಥ ಒಂದು ಪರಿಭಾಷೆ. ಇದು ಬದುಕಿನಲ್ಲಿ ದೊರೆಯುವ ಇತರ ಬಗೆಯ ಆನಂದಗಳಿಂದ ಭಿನ್ನ ಸ್ವರೂಪವನ್ನು ಪಡೆದಿದೆ. ನೈತಿಕ-ಅಲ್ಲದ, ಉಪಯೋಗಿ ಅಲ್ಲದ, ಸಂಗ್ರಣಶೀಲವಲ್ಲದ ಸೌಂದರ್ಯ ಆನಂದಗಳಲ್ಲಿ ಅತ್ಯಂತ ಪರಿಶುದ್ಧವಾದದ್ದು. ಕಲಾಕೃತಿಯ ಹೊರಗಿನ ಪೂರ್ವಾಗ್ರಹಗಳಿಗೆ ಅತಿ ಅಲ್ಪವಾಗಿ ಬದ್ಧವಾಗಿರುವಂಥದ್ದು(ಈಸ್ತೆಟಿಕ್ ಅಪ್ರಿಸಿಯೇಷನ್). ಸೌಂದರ್ಯದ ಪರಿಭಾವನೆ ಸೌಂದರ್ಯಾನುಭವದ ಆನಂದಕ್ಕಿಂತ ಭಿನ್ನವಾದದ್ದು. ಸೌಂದರ್ಯಾನುಭವದ  ಆನಂದ ಕೃತಿಯೊಂದರಿಂದ ಪಡೆಯುವ ಅನುಭವವನ್ನು ಕುರಿತದ್ದು. ಆ ಅನುಭವ ತಪ್ಪು ಆಗಿರಬಹುದು; ಅಶಿಕ್ಷಿತವಾಗಿರಬಹುದು; ಅ-ಯುಕ್ತವೂ ಆಗಿರಬಹುದು; ಸೌಂದರ್ಯದ ಪರಿಭಾವನೆ ಕೃತಿಯ ಲಕ್ಷಣಗಳ ಮೇಲೆ ಹೆಚ್ಚಿನ ಒತ್ತನ್ನು ಸೂಚಿಸುತ್ತದೆ. ಒಂದು ಕೃತಿಯನ್ನು ಗಮನಿಸುವಾಗ ಸೌಂದರ್ಯವನ್ನು ಕುರಿತ ಎಚ್ಚರ ಇರಬೇಕಾಗುತ್ತದೆ. ಇಲ್ಲದೆ ಹೋದರೆ ಸೌಂದರ್ಯಾಂಶಗಳು ಗ್ರಹಿಕೆಗೆ ಬಾರದೆಹೋಗಬಹುದು. ಸೌಂದರ್ಯವನ್ನು ಕುರಿತ ಎಚ್ಚರ ಉಳಿಯಬೇಕಾದರೆ ಕೃತಿಯಲ್ಲಿ ತಲ್ಲೀನರಾಗದೆ ಒಂದು ದೂರ (ಈಸ್ತೆಟಿಕ್ ಡಿಸ್ಟೆನ್ಸ್) ವನ್ನು ಉಳಿಸಿಕೊಳ್ಳಬೇಕಾಗುತ್ತದೆ. (ಈಸ್ತೆಟಿಕ್ ಮೆರಿಟ್) ಸೌಂದರ್ಯದ ಯೋಗ್ಯತೆಯನ್ನು ಸೌಂದರ್ಯದ ಗುಣ ಮತ್ತು ಅದಕ್ಕೆ ತೋರುವ ಪ್ರತಿಕ್ರಿಯೆಗಳಿಂದ ಬೇರ್ಪಡಿಸಬೇಕಾದದ್ದು ಅಗತ್ಯ. ಒಂದು ಕೃತಿಯಲ್ಲಿ ಸೌಂದರ್ಯಾಂಶಗಳು ಇದ್ದು, ಅದನ್ನು ಪರಿಭಾವಿಸಿ ಮೆಚ್ಚಿಕೊಂಡರೂ ಆ ಕೃತಿಯು ಆ ಪ್ರಕಾರದ ಕಳಪೆಯಾದ ಪ್ರತಿನಿಧಿಯಾಗಿರುವುದೂ ಸಾಧ್ಯ. ಯೋಗ್ಯತೆ ಮತ್ತು ಆನಂದಕ್ಕೆ ಅನಿವಾರ್ಯವಾದ ಸಂಬಂಧವೇನೂ ಇಲ್ಲ. ಅಶಿಕ್ಷಿತವಾದ ಮತ್ತು ಅಪಕ್ವವಾದ ಸಂವೇದನೆಗಳಿರುವವರು ಅಪಕ್ವ, ಅಯೋಗ್ಯ ಕೃತಿಯಿಂದಲೇ ಸೌಂದರ್ಯಾನುಭವ ಆನಂದವನ್ನು ಪಡೆಯಬಹುದು (ಈಸ್ತೆಸಿಸ್ಸ್). ಸೌಂದರ್ಯಗ್ರಹಿಕೆ ಸಾಮಾನ್ಯವಾಗಿ ಸೌಂದರ್ಯಾನುಭವದ ಆನಂದ ಮತ್ತು ಪರಿಭಾವನೆಗಳ ಸಂಮ್ಮಿಲನವಾಗಿರುತ್ತದೆ. ಸೌಂದರ್ಯದ ಗ್ರಹಿಕೆ ಮೂರು ವಿಧವಾಗಿರಲು ಸಾಧ್ಯ. 1. ಕೃತಿಯ ಸ್ವರೂಪವನ್ನು ಕುರಿತು ಗಮನಿಸಿ ವಿವಿಧ ಅಂಗಗಳ ನಡುವೆ ಅಥವಾ ವಿವಿಧ ಅಂಗಗಳು ಮತ್ತು ಕೃತಿಯ ಒಟ್ಟು ಸ್ವರೂಪಕ್ಕೆ ಇರುವ ಸಾಂಗತ್ಯವನ್ನು ಗ್ರಹಿಸುವ ಮೂಲಕ ಬರುವ ಸೌಂದರ್ಯದ ಗ್ರಹಿಕೆ. ಇದು ಸಾಹಿತ್ಯಕ್ಕಿಂತ ಹೆಚ್ಚಾಗಿ ಇತರ ಕುಶಲ ಕಲೆಗಳಿಗೆ ಅನ್ವಯವಾಗುತ್ತದೆ. 2. ಕೃತಿಯ ವಸ್ತು ಮತ್ತು ಸ್ವರೂಪದ ಸಂಗತತೆಯ ಅರಿವಿನಿಂದ ಉಂಟಾಗುವ ಸೌಂದರ್ಯಗ್ರಹಿಕೆ. 3. ಕೃತಿಯ ಯಾವುದಾದರೂ ಒಂದು ಅಂಗದ ಸೌಂದರ್ಯಾಂಶಗಳನ್ನು ಗುರುತಿಸುವ ಮೂಲಕ ಆಗುವ ಸೌಂದರ್ಯ ಗ್ರಹಿಕೆ.

	ಸೌಂದರ್ಯಮೀಮಾಂಸೆಯಲ್ಲಿ ಸೌಂದರ್ಯವೆಂದರೇನು ಎಂದು ಅರಿಯುವುದರ ಜೊತೆಗೆ ಅದನ್ನು ಗ್ರಹಿಸುವ ವಿಧಾನವನ್ನು ಕುರಿತ ಅಧ್ಯಯನವೂ ಸೇರಿದೆ.				
						*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ